ಮಿರ್ಜಾ, ಇಸ್ಮಾಯಿಲ್ ಮಹಮ್ಮದ್
 	1883-1959. ಪ್ರಸಿದ್ಧ ಆಡಳಿತಗಾರರು, ಮೈಸೂರು ಸಂಸ್ಥಾನದ ದಿವಾನರು (1926-41).

	ಪರ್ಷಿಯದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಗಣ್ಯ ಕುಟುಂಬವೊಂದರಲ್ಲಿ 1883 ಅಕ್ಟೋಬರ್ 20ರಂದು ಜನಿಸಿದರು. ಬಾಲ್ಯವಿದ್ಯಾಭ್ಯಾಸ ಬೆಂಗಳೂರಿನ ಸೇಂಟ್ ಪ್ಯಾಟ್ರಿಕ್ ಶಾಲೆ ಮತ್ತು ವೆಸ್ಲಿಯನ್ ಶಾಲೆಗಳಲ್ಲಿ. ಅನಂತರ ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ವಿದ್ಯಾಭ್ಯಾಸಕ್ಕೆ ಪ್ರಾರಂಭಿಸಿದ (1901) ವಿಶೇಷ ಶಾಲೆಯಲ್ಲಿ ಅದರ ಸಹಪಾಠಿಗಳಾಗಿದ್ದು, ಮುಂದೆ ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಪದವೀಧರರಾಗಿ (1905). ಅದೇ ವರ್ಷ ಮೈಸೂರು ಸರ್ಕಾರದ ಪೋಲೀಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಗಿ ನೇಮಕವಾದರು. ಮಹಾ ರಾಜರ ಉಪಕಾರ್ಯದರ್ಶಿ (1908), ಹುಜೂರ್ ಕಾರ್ಯದರ್ಶಿ (1914), ಆಪ್ತಕಾರ್ಯದರ್ಶಿ (1923) ಹುದ್ದೆಗಳನ್ನು ನಿರ್ವಹಿಸಿ 1926ರಲ್ಲಿ ಸಂಸ್ಥಾನದ ದಿವಾನರಾದರು.

	ಇವರು ದಿವಾನರಾಗಿದ್ದ ಹದಿನೈದು ವರ್ಷಗಳಲ್ಲಿ (1926-41) ಸರ್. ಎಂ. ವಿಶ್ವೇಶ್ವರಯ್ಯನವರು ಹಾಕಿದ್ದ ತಳಹದಿಯ ಮೇಲೆ ರಾಜ್ಯದ ಸರ್ವತೋಮುಖ ಬೆಳೆವಣಿಗೆಯನ್ನು ಸಾಧಿಸಲು ಯತ್ನಿಸಿದರು. ಮೈಸೂರು ಸಂಸ್ಥಾನ ಬ್ರಿಟಿಷರಿಗೆ ಕೊಡಬೇಕಾಗಿದ್ದ ಕಪ್ಪವನ್ನು 35 ಲಕ್ಷದಿಂದ 10.5 ಲಕ್ಷಕ್ಕೆ ಇಳಿಸಿದರು (1928). ಮಂಡ್ಯ, ಮಳವಳ್ಳಿ ಮತ್ತು ಟಿ. ನರಸೀಪುರ ತಾಲ್ಲೂಕುಗಳಲ್ಲಿ ನೀರಾವರಿ ಸೌಲಭ್ಯವನ್ನು ಒದಗಿಸುವ ಇರ್ವಿನ್ ನಾಲೆ (ಈಗಿನ ವಿಶ್ವೇಶ್ವರಯ್ಯ ನಾಲೆ) ನಿರ್ಮಾಣ ಮೊದಲಾದ ಕಾರ್ಯಗಳಿಂದ ಇವರ ಆಡಳಿತ ಕಾಲದಲ್ಲಿ 48,564 ಹೆಕ್ಟೇರ್ ಭೂಮಿ ನೀರಾವರಿ ವ್ಯವಸಾಯಕ್ಕೆ ಬಂದಿತು. ಜೋಗ್ ಮತ್ತು ಶಿಂಷಾಗಳಲ್ಲಿ ವಿದ್ಯುದುತ್ಪಾದನಾ ಸ್ಥಾವರಗಳನ್ನು ಸ್ಥಾಪಿಸಿದ್ದಲ್ಲದೆ, ಗ್ರಾಮಗಳಿಗೂ ವಿದ್ಯುತ್ ಒದಗಿಸುವ ಯೋಜನೆಯನ್ನು ಇಡೀ ಭಾರತದಲ್ಲೇ ಮೊದಲು ಈ ಸಂಸ್ಥಾನದಲ್ಲಿ ಜಾರಿಗೆ ತಂದರು. ಭದ್ರಾವತಿಯಲ್ಲಿ ಕಾಗದ ಮತ್ತು ಸಿಮೆಂಟ್ ಕಾರ್ಖಾನೆಗಳು, ಬೆಂಗಳೂರಿನಲ್ಲಿ ಪಿಂಗಾಣಿ ಮತ್ತು ವಿಮಾನ ಕಾರ್ಖಾನೆಗಳೂ. ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ, ಬೆಳಗೊಳದಲ್ಲಿ ರಾಸಾಯನಿಕ ಮತ್ತು ಗೊಬ್ಬರದ ಕಾರ್ಖಾನೆ, ಶಿವಮೊಗ್ಗದಲ್ಲಿ ಬೆಂಕಿಪೆಟ್ಟಿಗೆ ಕಾರ್ಖಾನೆ ಇತ್ಯಾದಿಗಳ ಸ್ಥಾಪನೆಯನ್ನು ಪ್ರೋತ್ಸಾಹಿಸಿ ರಾಜ್ಯದ ಔದ್ಯಮಿಕ ಪ್ರಗತಿಗೆ ಕಾರಣರಾದರು. ಗ್ರಾಮಕೈಗಾರಿಕೆಯನ್ನು ಉತ್ತಮಪಡಿಸಲು ಇವರು ಶ್ರಮಿಸಿದರು. ರೇಷ್ಮೆ ಕೈಗಾರಿಕೆಗೂ ಗಮನವಿತ್ತರು. ಮೈಸೂರಿನ ಉತ್ಪನ್ನಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಪಡೆಯುವ ಸಲುವಾಗಿ ಲಂಡನ್ನಿನಲ್ಲಿ ಒಬ್ಬ ಟ್ರೇಡ್ ಕಮಿಷನರನ್ನು ನೇಮಿಸಿದರು. ಬೆಂಗಳೂರು ಮತ್ತು ಮೈಸೂರು ನಗರಗಳನ್ನು ಸುಂದರಗೊಳಿಸಿದ್ದಲ್ಲದೆ, ಕೃಷ್ಣ ರಾಜಸಾಗರ ಜಲಾಶಯದ ಸಮೀಪದಲ್ಲಿ ಪ್ರಸಿದ್ಧ ಬೃಂದಾವನವನ್ನು ನಿರ್ಮಿಸಲು ಮಿರ್ಜಾರವರೇ ಕಾರಣ. ಗಾಂಧೀಜಿಯವರನ್ನು 1927ರಲ್ಲಿ ಮೈಸೂರಿಗೆ ಆಹ್ವಾನಿಸಿ ಕೆಲವು ಕಾಲ ಆರೋಗ್ಯ ಸುಧಾರಣೆಗಾಗಿ ನಂದಿಬೆಟ್ಟದಲ್ಲಿ ತಂಗುವಂತೆ ಮಾಡಿದ್ದರು. ಮಿರ್ಜಾರವರು ಲಂಡನ್ನಿನಲ್ಲಿ ಮೂರು ಬಾರಿ ನಡೆದ (1930-32) ದುಂಡುಮೇಜಿನ ಪರಿಷತ್ತುಗಳಲ್ಲೂ ದಕ್ಷಿಣ ಭಾರತದ ದೇಶಿ ರಾಜ್ಯಗಳ ಪ್ರತಿನಿಧಿಯಾಗಿ ಭಾಗವಹಿಸಿದರು. ಭಾರತದ ಭಾವೀರಾಜ್ಯ ಘಟನೆಯಲ್ಲಿ ದೇಶಿ ರಾಜ್ಯಗಳ ಮತ್ತು ಬ್ರಿಟಿಷ್ ಭಾರತದ ಪ್ರಾಂತ್ಯಗಳ ಸಂಯುಕ್ತ ವ್ಯವಸ್ಥೆಯ ಅಭಿಪ್ರಾಯವನ್ನು ಸ್ಪಷ್ಟೀಕರಿಸಿದರು. ಇವರ ಕಾಲದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಮೈಸೂರು ರಾಜ್ಯದಲ್ಲೂ ಬಿರುಸಾಗಿ ನಡೆದು ಸರ್ಕಾರಕ್ಕೂ ಜನತೆಗೂ ನಡುವೆ ಅನೇಕ ಘರ್ಷಣೆಗಳುಂಟಾದವು. ನಾಲ್ವಡಿ ಕೃಷ್ಣರಾಜ ಒಡೆಯರ್ ಅನಂತರ ಜಯಚಾಮರಾಜ ಒಡೆಯರ್ ಅವರು 1940ರಲ್ಲಿ ಸಿಂಹಾಸನಕ್ಕೆ ಬಂದಮೇಲೂ ಕೆಲಕಾಲ ದಿವಾನರಾಗಿದ್ದು 1941ರ ಮೇ ತಿಂಗಳಲ್ಲಿ ವಿಶ್ರಾಂತಿ ಪಡೆದರು.

	ಮೈಸೂರಿನಿಂದ ನಿವೃತ್ತರಾದ ಬಳಿಕ ಜಯಪುರದಲ್ಲಿ ಮುಖ್ಯ ಮಂತ್ರಿಯಾಗಿ (1942-46) ಆ ನಗರದ ಸೌಂದರ್ಯವರ್ಧನೆ. ರಾಜಸ್ಥಾನ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತು ಆ ದೇಶದ ಸಂವಿಧಾನದ ಹಲವು ಬದಲಾವಣೆಗಳಿಗೆ ಕಾರಣರಾದರು. 1946ರ ಆಗಸ್ಟ್‍ನಿಂದ 1947ರ ಮೇ ತನಕ ಹೈದರಾಬಾದ್ ಸಂಸ್ಥಾನದ ಪ್ರಧಾನಮಂತ್ರಿಯಾಗಿದ್ದರು.

	ನಿಷ್ಠಾವಂತ ಅಧಿಕಾರಿಯೆಂದು ಹೆಸರು ಗಳಿಸಿದ್ದ ಇವರಿಗೆ ಬ್ರಿಟಿಷ್ ಪ್ರಭುತ್ವದಿಂದ 1930ರಲ್ಲಿ ಕೆ.ಸಿ.ಐ.ಇ. ಪ್ರಶಸ್ತಿ ದೊರಕಿತು.

	ಮಿರ್ಜಾರವರು 1959ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ